Sunday, 30 December 2018

ಎಡೆಬಿಡದೇ ಸುರಿದ ಮಳೆಗೆ


ಎಡೆಬಿಡದೇ ಮಳೆ; ತಿಳಿಯಲಿಲ್ಲ
ಹಾಗೇಕೆ ಸುರಿಯಿತೆಂದು
ಬೆಚ್ಚಗಿರಲಿ ಎಂದು ಬಿಸಿಲಿಗಿಟ್ಟ ಕನಸ್ಸೆಲ್ಲಾ
ನೆನೆದು ಹೋದವು;
ಬಿದ್ದ ಮಳೆ ರಬಸಕ್ಕೆ ನೀರಲ್ಲಿ
ಕೊಚ್ಚಿ ಹೋದವು, ತೇಲಿದವು, ಕೆಲವು
ಬಣ್ಣದ ಕನಸುಗಳ ಬಣ್ಣವೆಲ್ಲ, ತೋಯ್ದ್ಯು ಹೋಗಿ
ಒದ್ದಾಡಿದವು ಖಾಲಿಯಾಗಿ,
ಹರಿಯಿತು, ಬಣ್ಣದೋಕುಳಿಯ ನೀರು ಎಲ್ಲೆಲ್ಲೋ

ಸಿಡಿದೇ ಬಿಟ್ಟವು, ಪುಟ್ಟ ಪುಟ್ಟ ಪಾದಗಳ
ಚಪ್ಪಲಿಯಡಿ ಸಿಲುಕಿ, ನಲುಗಿ,
ಕೇಸರ ರಾಡಿಯ ಜೊತೆ ಬಟ್ಟೆಗೆಲ್ಲಾ

ನಡೆದವು, ಕೆಲವು ಎತ್ತೆತೋ ದಿಕ್ಕ ಪಾಲಾಗಿ
ಅಪರಿಚಿತ ಗುಡಿಸಲಿಗೆ, ಬಂಗಲೆಗೆ, ಎತ್ತಲೆತ್ತಲೋ
ಬಸ್ಸಿನಲಿ, ರೈಲಿನಲಿ,
ಹೀಗೆ ಏಕಾಂತದಲಿ ಬಿಟ್ಟು ನನ್ನ

ಕಿಟಕಿಗೆ ಬಾಗಿಲಿರಲಿಲ್ಲ; ತದೇಕಚಿತ್ತವಾಗಿ
ನೋಡತೊಡಗಿದ ಕಣ್ಣು ರೆಪ್ಪೆ
ಬಡಿಯಲಿಲ್ಲ; ನಿಶ್ಚಲ ನೋಟ ನಭದ ನಕ್ಷತ್ರದೆಡೆಗೆ
ಏನೋ ಹುಡುಕುವ ತವಕ

ಕನಸುಗಳು ತೊಳೆದ ಬಟ್ಟೆಯಿಂದ ಜಾರಿ ಭುವಿಗಿಳಿದು
ಮೊಳೆದು, ಬೆಳೆದು,
ಅರಳಿ ಹೂವಾಗಿ ನಿಂತಿದೆ, ಕಂಗಳಿಗೆ ಅಪರಿಚಿತವಾಗಿ

ಅದೇ ಹಾದಿಯಲ್ಲಿ . ನಿರ್ಭಾವುಕವಾಗಿ
ಸಾಗುವಾಗ
ಹೆಜ್ಜೇನು ಮಕರಂದ ಹೀರಿ, ಕನಸ ಕದ್ದು
ಹಾರುವ ಕೊನೆಯ ಕ್ಷಣದಲ್ಲಿತ್ತು;

Friday, 28 December 2018

ನೀ ನನ್ನೊಳಗೆ


ನೀನು ನನ್ನೊಳಗೆ ಅರಳಿದ ಕತ್ತಲೆಯಲ್ಲ;
ನೀನು ಬೆಳಕು
ನೀನು ಒಳಗೊಳಗೇ ಬೆಂದ ಯಾತನೆಯಲ್ಲ
ನೀ ನಗುವಂಚಿನ ನಿಮಿತ್ತ

ನೀನು  ಕಣ್ಣೊಳಗೆ ಅಡಗಿದ ಕಣ್ಣೇರಲ್ಲ;
ಕಣ್ಣ ಮಿಂಚು
ನೀನು ಉಸಿರೊಳಗೆ ಹೆಚ್ಚಿದ ಎದೆ ಬಡಿತದ ಗುಂಗಲ್ಲ;
ನೀನು ಉಸಿರು

ನೀನು ತುಡಿತವಲ್ಲ;
ಹೃದಯದೊಳಗಿನ ಒಂದು ತವಕ
ನೀನು ಮಾತಲ್ಲ,
ಸದ್ದಿಲ್ಲದೆ ಕುಳಿತ ಗಳಿಗೆ

ನೀನು ಕನಸಲ್ಲ;
ಹೃದಯದಂಚಲಿ ಉಳಿದ ನಿನ್ನೆಯ ನೆನಪು
ನೀನು ನಿನ್ನೆಯಲ್ಲ
ನಾಳೆಗಳ ಹೊಂಗನಸ ಬರೆದ ಚಿತ್ರದ ಕುರುಹು

ನೀ ನನ್ನೊಳಗೆ
ಮರೆತ ನಿನ್ನೆಯ ಕಾಣದ ನಾಳೆಯ
ಕನಸು ಹೊಸೆದ ದಿನಗಳು

Saturday, 24 November 2018

ಮತ್ತೆ ನನ್ನನು ನಾ ಪ್ರೀತಿಸಿ

ಒಮ್ಮೆ ನನ್ನ ಬಾಲ್ಯವಿತ್ತು;
ಯವ್ವನವಿತ್ತು;

ದಿನಗಳು ಸೇರಿ,
ಒಂದಷ್ಟು
ಮತ್ತೊಂದಷ್ಟು!
ಜವಾಬ್ದಾರಿ, ತಾಕಲಾಟದ ನಡುವೆ 
ಮತ್ತೆ ದಿನಗಳು ಸಾಗಿ  ಮುಪ್ಪು !?

ಏನನ್ನೋ  ಮರೆತಂತೆ  ನೆನಪು;
ಮರೆತೆನೇ ಪ್ರೀತಿಸುವುದನು ನನ್ನಾತ್ಮವ
ನಿನ್ನೆ - ನಾಳೆಗಳ  ಧಿಮಿತದಲಿ!
ಬದುಕ  ಸವಾರಿ  ಬಂದಾಯ್ತು  ಈ ತನಕ ...

ಆಸೆ  ಪ್ರತಿಷ್ಠೆಯಲಿ ಜೀವನ ಕಳೆದಾಯ್ತು, ಇಷ್ಟು ದಿನ
ಮರೆತು  ಬಿಟ್ಟೇನೇ ನನ್ನೊಳಗಿನ ನನ್ನ

ಮತ್ತೆ ಕೊಡವಿ
ಮರೆತ ಆಸೆ-ಕನಸ ಚಿಗುರಿಸಿ
ಮತ್ತೆ ಪ್ರೀತಿಸುವುದಿದೆ ಬದುಕುನು ನಿನ್ನೆಡೆಗೆ

Saturday, 7 July 2018

ಮರೀಚಿಕೆ


ನಿನ್ನೆ
ಮರೆತೂ ಮರೆತು ಹೋಗದ ದಿನಗಳು
ಹೃದಯದಂಚಿನ ಹೆಜ್ಜೆ ಗುರುತು
ಸುಮ್ಮನೆ ಸಾಗ ಹಾಕುವ  ನೆವ

ಸೆಳೆತದ ತಿಳಿ ನೀರ ಮೇಲೆ ಅರಳಿ ನಿಂತ
ಶುದ್ದ ತಾವರೆ, ಕೇಸರ ರಾಡಿಯಾ
ಸವಿ ಸುವಾಸನೆ

ಕಾಲಚಕ್ರದೊಳು ಬೆನ್ನಿಕ್ಕಿ ಹೊರಟ
ಬದುಕಲೊಂದು ಹುಡುಕಾಟ
ಪ್ರೀತಿ ಇದ್ದೋ, ಇಲ್ಲದೆಯೋ ನೋವು;

ಕಣ್ಣಂಚಿನ ಕಾಡಿಗೆಯಂತೆ, ಮೆಲ್ಲನೆ
ರಂಗು ಬಳಿಯ ಹೊರಟ ಕುಂಚ,
ಸದ್ದಿಲ್ಲದೇ ಸುರಿದ ಮಳೆಗೆ ಓಕುಲಿಯಾಡಿದೆ, ಬಣ್ಣ

ಕೊನೆಯಿರದ ಸ್ವಪ್ನದಲಿ ನೆನಪಿನ ತುಣುಕು
ಅಗಲಿಕೆಯ ಸೊಡರು, ಬೆಂಕಿ ಹಚ್ಚಿದೆ
ಉರಿವ ಜೀವದೊಳು ಸುಟ್ಟ ಹಸಿ ಬಯಕೆ

ನೀರವತೆಯ ಮೌನದ ನಿಶಕ್ತ ಮನಸು
ಸಸಿಯಾಗಿದೆ, ಕಾತರದ ನೋಟಕ್ಕೆ
ಮೊಗ್ಗಿಗೆ ಅಪ್ಪಿ ನಿಂತ ಇಬ್ಬನಿಯಂತೆ
ಮಧುರ ನೆನಪಿದೆ

ಹಸಿರ ಹಾಸಿ ನಿಂತ ಬಯಲು
ಒಂಟಿ ಪಯಣವೆಂದರೂ ನಗುವ ಹೂಗಳು,
ಚಿಲಿಪಿಲಿಗುಟ್ಟುವ ಹಕ್ಕಿ ಮರಿ,
ಹೃದಯದಲ್ಲೆಲ್ಲಾ ಹಾರಾಡುವ ಬಣ್ಣದ ಚಿಟ್ಟೆ
ಸುರಿವ ಸೋನೇ ಮಳೆ, ಬೆಳ್ಳಕ್ಕಿ ಸಾಲ ಪಯಣ
ಜೊತೆಗೆ ನಿನ್ನ ನೆನಪಿದೆ

ದೂರಾಗಿದೆ; ನಾ ಸಾಗಿ ಬಂದ ಹಾದಿಯ ನಾಂದಿ
ಅಲ್ಲೊಂದು ಮರೀಚಿಕೆಯ ಅಂತ್ಯವಿದೆ, ನಿರಂತರತೆ ಹಾದಿಯಲಿ

Tuesday, 3 July 2018

ನೆನಪುಗಳ ಧಫನ

ಮಳೆ ತೊಯ್ಯಲೆಂದೇ
ಬಂದಿದೆಯೇನೋ ಅನ್ನಿಸುತ್ತಿದೆ,
ಸುರಿದ ಮಳೆ ನೀರಿನಲಿ,
ತೇಲಿ ಬಿಡಲಿದ್ದೇನೆ, ನಿನ್ನ ನೆನಪುಗಳ ದೋಣಿಯಂತೆ
ಕಾದಿರು ಮುಂದೆ, ಎತ್ತಿಡು ಬೇಕೆನಿಸಿದಲ್ಲಿ

ಮತ್ತೆ ಖಾಲಿಯಾಗಿದ್ದೇನೆ ನೋಡು,
ಎದೆಯಲಿ ಭಾವನೆಗಳೇ ಇಲ್ಲದಂತೆ
ಎಸೆಯಬಾರದು ನೆನಪುಗಳ ಎಲ್ಲೆಂದರಲ್ಲಿ
ಆದರೂ ಅನಿವಾರ್ಯ 

ಮಾತಿಗಿರಲಿಲ್ಲ ನೀನು
ಅಖಂಡ ತೀರದಲಿ ನೋಯಿಸಿರಲ್ಲಿ ಒಂಟಿತನ
ಎಲ್ಲೋ ಕಳೆದು ಹೋಗಿದ್ದ ನನ್ನ ಕ್ಷಣಗಳು
ಬರತೊಡಗಿದವು ನನ್ನೆಡೆಗೆ

ನನ್ನೊಳಗೆ ಹೆಚ್ಚಿದ ಒತ್ತಡಗಳು
ತಡೆಯುತ್ತಿರಲಿಲ್ಲ ನನ್ನನ್ನು
ಒಳಗೊಳಗೇ ಕುದಿಯುವ ಈ ಬಡಿತ ಬೇಡವಿತ್ತು ನನಗೆ
ನೀ ಬರುವ ಹಾದಿಯಲಿ
ಕುಳಿತರಲಿಲ್ಲ ನಾ ಕಾಯುತ್ತ
ಬದುಕು ನಿಂತಲ್ಲಿ ನಿಲ್ಲುವುದಿಲ್ಲ ತಾನೇ
ಹಾಗೆ ಬದುಕನ್ನ ನಿಲ್ಲಿಸಲೂಬಾರದು

ಹೆಜ್ಜೆ ಗುರುತುಗಳಿವೆ ನೆಡೆದು ಬಂದ ಹಾದಿಯುದ್ದಕ್ಕೂ
ನೆನಪುಗಳು ಮಾತ್ರ ನೋಡುತ್ತಿವೆ ಅನಾಥವಾಗಿ

Tuesday, 26 June 2018

ಕನಸು ಬೇಯುತಿತ್ತು...


ಅಡುಗೆ ಮನೆ
ನಿನ್ನೆಯತನಕ ಹೊಕ್ಕವಳೇ ಅಲ್ಲ ಒಳಗೆ,
ಕುಕ್ಕರ್ನಿಂದ ಈಗಸ್ಟೇ ಎರಡನೇ
ಕೂಗು ಹೊರಟಿದೆ,          
ಇಷ್ಟು ಬೇಗ ಬೆಂದಿರಲಿಕ್ಕಿಲ್ಲ, ಕನಸು

ಚಾಚಿ ನಿಂತ ಬಯಲತ್ತ
ಮೊಗ ಒಡ್ಡಿ ಎರಡು ನಿಮಿಷ ಕಳೆದಿತ್ತೇನೋ
ಸಣ್ಣ ಕಿಟಕಿ, ಗಾಜಿನ ಬಾಗಿಲು ಅದಕ್ಕೇ
ಸ್ವಲ್ಪ ದೊಡ್ಡದಿರಬಹುದಿತ್ತು, ಬೆನ್ನಟ್ಟಲು ಕನಸ ಸ್ವಗತಕ್ಕೇ;
ನಕ್ಕಳವಳು-ನಮ್ಮ ದಿನಗಳಲ್ಲಿ ಕಿಟಕಿಯೇ
ಇರಲಿಲ್ಲ ಅಡುಗೆ ಮನೆಗೆಂದು
ಕೈಯಲಿನ್ನೂ ಹಸಿರಕ್ತದ ಕಲೆ ಮಾಸಿರಲಿಲ್ಲ!
ಚಾಕುವಿನಿಂದ ಕನಸು ಕತ್ತರಿಸುವಾಗ
ಕೈಕೊಯ್ದು ರಕ್ತ ಚೆಲ್ಲಿತ್ತು ಅಂದರೆ
ನಕ್ಕಾರು

ಇನ್ನೇನು ಮೂರನೇ ಕೂಗೂ ಹೊರಡಬಹುದು
ಹೀಗಿರಲಿಲ್ಲವಂತೆ; ಅಜ್ಜಿಯ ದಿನಗಳಲ್ಲಿ
ಪಾತ್ರೆಯಲ್ಲಿ ಕನಸ ಹಾಕಿ
ಉರಿ ಹಚ್ಚಿ ಬಿದಿರ ಕೊಳವೆಯಿಂದ
ಊದ ಬೇಕಿತ್ತತಂತೆ ಬೆಂಕಿ ಉರಿಯಲು

ಅಜ್ಜಿಯಂತೂ ಚಿಕ್ಕವಳಿರಬೇಕಾದರೆ
ಕಲಿತಿದ್ದಳಂತೆ ರಕ್ತ ಚೆಲ್ಲದೇ
ಕನಸು ಕತ್ತರಿಸಲು
ಆದರೆ ಉರಿ ಹಚ್ಚುವಾಗ ಮಾತ್ರ
ಬೇಡವೆನ್ನುವಷ್ಟು ಕಣ್ಣೀರು ಬರುತಿತ್ತಂತೆ
ಎದೆಯಲ್ಲಿ ಬೆಂಕಿಯನ್ನು ಯಾರಿಗೂ ಕಾಣದಂತೆ
ಅಡಗಿಸಿಟ್ಟುಕೊಂಡು ನಗಬೇಕಿತ್ತಂತೆ
ಅಡುಗೆ ಮನೆಯ ಮೂಲೆಯಲ್ಲಿ
ಮಣ್ಣಿನ ನೆಲದಲ್ಲಿ
ಎಷ್ಟು ಕಣ್ಣೀರ ಹನಿ ಇಂಗಿ ಹೋದವೋ
ಲೆಕ್ಕಕ್ಕೆ ಇಲ್ಲವಂತೆ
ಈಗೀಗ ಅವಳ ಕಂಗಳಲ್ಲಿ ಕಣ್ಣೀರೇ
ಅಡಗಿ ಹೋಗಿದೆ.
ಮೂರನೇ ಕೂಗು ಆಯಿತು
ಈಗ ಬೆಂದಿರಬಹುದು
ಅವಳಂತೆ ನನ್ನ ಕಣ್ಣೀರೂ
ಹೀಗೆ ಮೂಲೆಯಲ್ಲಿ ಹರಿಯುವುದು
ಬೇಡ,
ಮಾರ್ಬಲ್ ನೆಲದಲ್ಲಿ!
ಕಣ್ಣಂಚಲ್ಲೇ ಅಡಗಿ ಹೋಗಲಿ

ಬೆಂಕಿ ಆರಿಸುವ ಮುನ್ನ
ಮತ್ತೆ ನೆನಪಾಯಿತು.
ಕಲೆ ಉಳಿಯದಂತೆ ತೊಳೆಯುವಾಗಲೇ
ನಿರ್ದರಿಸಿದೆ ನಾನೂ ಕಲಿಯಬೇಕು,
ನಾಳೆಯಿಂದ ಅಜ್ಜಿಯ ಹಾಗೆಯೇ
ಗಾಯ ಮಾಡಿಕೊಳ್ಳದೇ ರಕ್ತಚಿಮ್ಮದಂತೆ
ಕನಸು ಕತ್ತರಿಸಲು!

ಆಗಷ್ಟೇ ಕಂಬನಿ ಹನಿದು


ತೇವದ ಕಂಗಳ ನೋಟ
ಬಾಣದಂತೆ ನಾಟಿದೆ  ಎದೆಯೊಳಗೆ

ನಿನ್ನ ಮೌನದ ಆಳ ತಲುಪುವ ಜಾಣ್ಮೆ
ಸಿದ್ಧಿಸಿಲ್ಲ ನನಗೆ; ಮನಸಾರೆ ನಕ್ಕು ಬಿಡು ಒಮ್ಮೆ

ನೀ ಆಡದ ಮಾತುಗಳ ಮರ್ಮ ಅರಿಯುವ ಹೆಜ್ಜೆ;
ನಿನ್ನ ಗುಂಗಿನ ನಶೆಯ ಚೆಲ್ಲಿ ನಿಲ್ಲುವ ಪ್ರೀತಿ ;
ನಿನಗಷ್ಟೆ ಸಾಧ್ಯ!

ಭೋರ್ಗರೆವ ತೆರೆಗಳ ಅಬ್ಬರ
ಸವಿಯುವ ಮನಸ್ಸು; ನಾಲ್ಕು
ಗೋಡೆಗಳ ನಡುವೆ ಸ್ತಬ್ಧವಾಗಿದೆ; ಮಾತು
ಮರೆತಿವೆ ಗೋಡೆಗಳು ; ನಿನ್ನವಲ್ಲವೇ ಬದುಕು

ನನ್ನೆದೆಯ ಭಾವ ನಿನ್ನ ತಲುಪಲು
ಸಪ್ತ ಸಾಗರ ನಿಂತಿದೆ,
ಸೋರುತ್ತಿದೆ, ಹಲವು ದಿನಗಳ ನಶೆ, ಹಗುರಾದ ಉಸಿರು,
ನಿಲ್ಲದಿರು ದಿಗಂತ ಮುಟ್ಟುವವರೆಗೂ