Saturday, 7 July 2018

ಮರೀಚಿಕೆ


ನಿನ್ನೆ
ಮರೆತೂ ಮರೆತು ಹೋಗದ ದಿನಗಳು
ಹೃದಯದಂಚಿನ ಹೆಜ್ಜೆ ಗುರುತು
ಸುಮ್ಮನೆ ಸಾಗ ಹಾಕುವ  ನೆವ

ಸೆಳೆತದ ತಿಳಿ ನೀರ ಮೇಲೆ ಅರಳಿ ನಿಂತ
ಶುದ್ದ ತಾವರೆ, ಕೇಸರ ರಾಡಿಯಾ
ಸವಿ ಸುವಾಸನೆ

ಕಾಲಚಕ್ರದೊಳು ಬೆನ್ನಿಕ್ಕಿ ಹೊರಟ
ಬದುಕಲೊಂದು ಹುಡುಕಾಟ
ಪ್ರೀತಿ ಇದ್ದೋ, ಇಲ್ಲದೆಯೋ ನೋವು;

ಕಣ್ಣಂಚಿನ ಕಾಡಿಗೆಯಂತೆ, ಮೆಲ್ಲನೆ
ರಂಗು ಬಳಿಯ ಹೊರಟ ಕುಂಚ,
ಸದ್ದಿಲ್ಲದೇ ಸುರಿದ ಮಳೆಗೆ ಓಕುಲಿಯಾಡಿದೆ, ಬಣ್ಣ

ಕೊನೆಯಿರದ ಸ್ವಪ್ನದಲಿ ನೆನಪಿನ ತುಣುಕು
ಅಗಲಿಕೆಯ ಸೊಡರು, ಬೆಂಕಿ ಹಚ್ಚಿದೆ
ಉರಿವ ಜೀವದೊಳು ಸುಟ್ಟ ಹಸಿ ಬಯಕೆ

ನೀರವತೆಯ ಮೌನದ ನಿಶಕ್ತ ಮನಸು
ಸಸಿಯಾಗಿದೆ, ಕಾತರದ ನೋಟಕ್ಕೆ
ಮೊಗ್ಗಿಗೆ ಅಪ್ಪಿ ನಿಂತ ಇಬ್ಬನಿಯಂತೆ
ಮಧುರ ನೆನಪಿದೆ

ಹಸಿರ ಹಾಸಿ ನಿಂತ ಬಯಲು
ಒಂಟಿ ಪಯಣವೆಂದರೂ ನಗುವ ಹೂಗಳು,
ಚಿಲಿಪಿಲಿಗುಟ್ಟುವ ಹಕ್ಕಿ ಮರಿ,
ಹೃದಯದಲ್ಲೆಲ್ಲಾ ಹಾರಾಡುವ ಬಣ್ಣದ ಚಿಟ್ಟೆ
ಸುರಿವ ಸೋನೇ ಮಳೆ, ಬೆಳ್ಳಕ್ಕಿ ಸಾಲ ಪಯಣ
ಜೊತೆಗೆ ನಿನ್ನ ನೆನಪಿದೆ

ದೂರಾಗಿದೆ; ನಾ ಸಾಗಿ ಬಂದ ಹಾದಿಯ ನಾಂದಿ
ಅಲ್ಲೊಂದು ಮರೀಚಿಕೆಯ ಅಂತ್ಯವಿದೆ, ನಿರಂತರತೆ ಹಾದಿಯಲಿ

Tuesday, 3 July 2018

ನೆನಪುಗಳ ಧಫನ

ಮಳೆ ತೊಯ್ಯಲೆಂದೇ
ಬಂದಿದೆಯೇನೋ ಅನ್ನಿಸುತ್ತಿದೆ,
ಸುರಿದ ಮಳೆ ನೀರಿನಲಿ,
ತೇಲಿ ಬಿಡಲಿದ್ದೇನೆ, ನಿನ್ನ ನೆನಪುಗಳ ದೋಣಿಯಂತೆ
ಕಾದಿರು ಮುಂದೆ, ಎತ್ತಿಡು ಬೇಕೆನಿಸಿದಲ್ಲಿ

ಮತ್ತೆ ಖಾಲಿಯಾಗಿದ್ದೇನೆ ನೋಡು,
ಎದೆಯಲಿ ಭಾವನೆಗಳೇ ಇಲ್ಲದಂತೆ
ಎಸೆಯಬಾರದು ನೆನಪುಗಳ ಎಲ್ಲೆಂದರಲ್ಲಿ
ಆದರೂ ಅನಿವಾರ್ಯ 

ಮಾತಿಗಿರಲಿಲ್ಲ ನೀನು
ಅಖಂಡ ತೀರದಲಿ ನೋಯಿಸಿರಲ್ಲಿ ಒಂಟಿತನ
ಎಲ್ಲೋ ಕಳೆದು ಹೋಗಿದ್ದ ನನ್ನ ಕ್ಷಣಗಳು
ಬರತೊಡಗಿದವು ನನ್ನೆಡೆಗೆ

ನನ್ನೊಳಗೆ ಹೆಚ್ಚಿದ ಒತ್ತಡಗಳು
ತಡೆಯುತ್ತಿರಲಿಲ್ಲ ನನ್ನನ್ನು
ಒಳಗೊಳಗೇ ಕುದಿಯುವ ಈ ಬಡಿತ ಬೇಡವಿತ್ತು ನನಗೆ
ನೀ ಬರುವ ಹಾದಿಯಲಿ
ಕುಳಿತರಲಿಲ್ಲ ನಾ ಕಾಯುತ್ತ
ಬದುಕು ನಿಂತಲ್ಲಿ ನಿಲ್ಲುವುದಿಲ್ಲ ತಾನೇ
ಹಾಗೆ ಬದುಕನ್ನ ನಿಲ್ಲಿಸಲೂಬಾರದು

ಹೆಜ್ಜೆ ಗುರುತುಗಳಿವೆ ನೆಡೆದು ಬಂದ ಹಾದಿಯುದ್ದಕ್ಕೂ
ನೆನಪುಗಳು ಮಾತ್ರ ನೋಡುತ್ತಿವೆ ಅನಾಥವಾಗಿ