Thursday, 15 August 2013

ಮಳೆ

ಯಾರ ನೆನಪು ಕಾಡಿತೋ
ಬಾನಿಗೆ ಕಣ್ಣಿರಾಗಿ ಭುವಿ ತಲುಪಿದೆ
ಮಳೆ ಹನಿ

ಗೆಳೆಯನ ಯಾವ ಕನಸು
ಮುರಿಯಿತೆಂದು ಕಳವಳ ಭುವಿಗೆ
ಒದ್ದೆಯಾಗಿದೆ ಮನ

ಹಿತವಾಗಿದೆ ಮೊದಲ ಮಳೆಗೆ ನೆನೆದ
ಭುವಿಯ ಮಣ್ಣ ವಾಸನೆ, ನಾಳೆಗಳ ಮರೆಸುವಂತೆ

ಬದುಕಿನೆದುರು ನಿಂತು


ಅವನಿದ್ದ, ದಿಟ್ಟ ನೋಟದ
ಎದುರಿಗೆ; ಗೆಳೆಯ-ನಿನ್ನೆಯ ಕನಸು
ಆದರೂ ಅವನಿಲ್ಲ, ಎದೆಯಲ್ಲಿನ ಪ್ರೀತಿಯ ತಾಪಕೆ
ಹಸಿ ರಕ್ತದ ಹನಿ ಹನಿಸಿ, ಪ್ರೀತಿಯ ನೆನಪಿನ ಬಣ್ಣ ಬಳಿದು
ಎದುರಿಗೆ ತಂದಿಟ್ಟು,
ಭ್ರಮಿಸುವ ಭ್ರಮೆ..!!! ಅವನಿಲ್ಲ

ಜೊತೆಗೆ ಮಸುಕು ನೆನಪು
ನೆಟ್ಟ ದ್ರಷ್ಟಿ ಎದುರಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ ಚಿಟ್ಟೆಗೆ
ಭಾರವಿರಲಿಲ್ಲ, ನಾಳೆಗಳ ನಗುವಿನ ಭಾರ.

ಕಾಡಲೆಂದೆ ಉಳಿದ ಪ್ರಶ್ನೆಗೂ
ಹುಡುಕ ಹೊರಡುವ ಉತ್ತರಕ್ಕೂಕೊನೆಯಿರಲಿಲ್ಲ.
ಕಣ್ಣ ಹೊಳಪಿನ ಮಸುಕು
ಯಾರ ಅರಿವಿಗೂ ಬರಲಿಲ್ಲ; ಆತ ಬರುವವನಿದ್ದ
ಎಂದೂ ಕಾಣದ ಕನಸಿಗೆ
ಬಣ್ಣ ಹಚ್ಚುವ ಹುಮ್ಮಸ್ಸಿನಲಿ, ನಗು ಬೆರೆಸಿ ಎದೆ ಭಾರ ಇಳಿಸಿ
ಪ್ರೀತಿಯ ಕೊಲಾಜ಼್ ಬರೆಯುವನಿದ್ದ ಬದುಕಿನಲಿ

ಕಡಲ್  ತೆರೆಯ ಅಂಚಿನಲಿ
ಕಣ್ಮುಚ್ಚಿ, ಹೃದಯ ಎಸೆದು ತೊಳೆಯುವುದಿದೆ ಸ್ವಚ್ಚಂದಡಿ,
ಭ್ರಮೆಗೊಂದು ಅಂತ್ಯವಿಟ್ಟು ಕೊಂಡಿ ಬಿಡಿಸಿ ಬಿಟ್ಟು ಬಿಡುವುದಿತ್ತು ಕೊನೆತನಕ

ಕಣ್ಮುಚ್ಚಿದ್ದೆ;
ಭೋರ್ಗರೆತದ ಸದ್ದು, ತಾಕಲಾಟ,
ಕಡಲಿಗೋ ಮನಸಿಗೋ…
ಮೌನ ಮುರಿಯುವ ತೊಳಲಾಟ
ನೆನೆದಿತ್ತು, ಮನ, ಕನಸು, ಬದುಕು
ಇನ್ನಸ್ಟು ಮತ್ತಷ್ಟು ತೆರೆಗಳ ಭೋರ್ಗರೆತ
ಒಂದರ ಮೇಲೊಂದರಂತೆ ಅಪ್ಪಳಿಸಿದ್ದವು ದಿಗಂತದವರೆಗೂ

ಕಣ್ಬಿಟ್ಟೆ ಕನಸಂತೆ;
ಮೌನ. ಅಗಾಧ ಮೌನ
ದಿಟ್ಟ ನೋಟದ ಎದುರು ಅವನಿರಲ್ಲಿಲ್ಲ
ಆತ ಬರುವವನಿದ್ದ ನಾಳೆಗಳಲ್ಲಿ.