Wednesday, 3 September 2014

ಮುನಿಸಿಕೊಂಡ ಕವಿತೆ

ನನ್ನವೇ ಕ್ಷಣಗಳಲ್ಲಿ ನಕ್ಕು, ಅತ್ತು,
ಮಾತಿಗಿಳಿವ ಮುನ್ನವೇ,
ಮುನಿಸಿಕೊಂಡಿತು ಕವಿತೆ ನನ್ನ ಜೊತೆ..!!!

ಭಾವನೆಗಳ ತಾಕಲಾಟದಲಿ,
ಮೌನದ ಗುಂಗಿನಲಿ, ನೋವಿನ ಎಳೆ-ಎಳೆಯನ್ನೂ
ತನ್ನೊಳಗೆ ಕರಗಿಸಿಕೊಂಡಿದ್ದ ಕವಿತೆಗೆ
ಮುನಿಸು ನನ್ನಲ್ಲಿ

ಬರಲಾರೆನೆಂದು ಹಟಕ್ಕೆ ಬಿದ್ದ ಮಗುವಿನಂತೆ
ದೂರ ನಿಂತು ಕಾಡುತಿತ್ತು, ನಾ
ಭಾವನೆಗಳ ಭಾರವನು ಹೊರಲಾರದೆ
ಒಳಗೊಳಗೇ ಬೆಂದು ಕರಗುತಿದ್ದೆ ಕ್ಷಣ-ಕ್ಷಣ

ಕವಿತೆಯ ಮೌನ ಮುರಿಯಲು
ಕಾದ ಪ್ರತಿ ಗಳಿಗೆಯೂ ಸೋತಿದ್ದೆ ನಾನು
ಹಟಕ್ಕೆ ಕುಳಿತಂತೆ ಕಾಡಿತ್ತು ಮನ,

ಮುನಿಸಿಕೊಂಡಿದೆ ಕವಿತೆ ನನ್ನಲ್ಲಿ

ಮತ್ತೆ ಹುಡುಕಿ ಕವಿತೆಗಳ

ಹೆಕ್ಕಿ ತೆಗೆಯುವುದಿದೆ ಕವಿತೆಗಳ;

ಸಾಗಿ ಬಂದ ಹಾದಿಯ ನೆನಪಿಂದ
ಕಾಣ್ತುಂಬಿ ನಿಂತ ಕಂಗಳಿಂದ
ಎದೆಯಾಳದ ಯಾತನೆಯ ಮಡಿಲಿಂದ
ತುಟಿಬಿಚ್ಚಿ ನಕ್ಕ ನಗುವಿನ ಕೊನೆಯಿಂದ

ಮತ್ತೆ, ಹೆಕ್ಕಿ ತೆಗೆಯುವುದಿದೆ ಕವಿತೆಗಳ;
ಪುಸ್ತಕದ ಕೊನೆಯ ಪುಟದಿಂದ
ಬರೆಯದೆ ಉಳಿದ ಸಾಲುಗಳಿಂದ
ಎದೆಯಲ್ಲೇ ಕರಗಿದ ಕತೆಯಿಂದ
ಮೌನದ ತುದಿಯ ಭಾವನೆಗಳಿಂದ
ಗೆಳೆಯ ಮತ್ತೆ ನಿನ್ನ ಪ್ರೀತಿಯ ನಶೆಯಿಂದ

ಹೆಕ್ಕಿ ತೆಗೆಯುವುದಿದೆ ಕವಿತೆಗಳ ಮತ್ತೆ,
ಕಾಡುವ ನೆನಪಿನ ನಿಟ್ಟುಸಿರಿಂದ
ಸೋಲೊಪ್ಪದ ಕನಸಿಂದ
ಹುಚ್ಚು ಮನಸಿನ ಕೆಚ್ಚೆದೆಯಿಂದ
ಕಡಲಂಚಿನ ನೆನಪಿನಲೆಯಿಂದ

ಮತ್ತೆ,
ಹೆಕ್ಕಿ ತೆಗೆಯುವುದಿದೆ ಕವಿತೆಗಳ
ಮರೆತು ಬದುಕಿದ ಬದುಕಿಂದ