Sunday, 30 December 2018

ಎಡೆಬಿಡದೇ ಸುರಿದ ಮಳೆಗೆ


ಎಡೆಬಿಡದೇ ಮಳೆ; ತಿಳಿಯಲಿಲ್ಲ
ಹಾಗೇಕೆ ಸುರಿಯಿತೆಂದು
ಬೆಚ್ಚಗಿರಲಿ ಎಂದು ಬಿಸಿಲಿಗಿಟ್ಟ ಕನಸ್ಸೆಲ್ಲಾ
ನೆನೆದು ಹೋದವು;
ಬಿದ್ದ ಮಳೆ ರಬಸಕ್ಕೆ ನೀರಲ್ಲಿ
ಕೊಚ್ಚಿ ಹೋದವು, ತೇಲಿದವು, ಕೆಲವು
ಬಣ್ಣದ ಕನಸುಗಳ ಬಣ್ಣವೆಲ್ಲ, ತೋಯ್ದ್ಯು ಹೋಗಿ
ಒದ್ದಾಡಿದವು ಖಾಲಿಯಾಗಿ,
ಹರಿಯಿತು, ಬಣ್ಣದೋಕುಳಿಯ ನೀರು ಎಲ್ಲೆಲ್ಲೋ

ಸಿಡಿದೇ ಬಿಟ್ಟವು, ಪುಟ್ಟ ಪುಟ್ಟ ಪಾದಗಳ
ಚಪ್ಪಲಿಯಡಿ ಸಿಲುಕಿ, ನಲುಗಿ,
ಕೇಸರ ರಾಡಿಯ ಜೊತೆ ಬಟ್ಟೆಗೆಲ್ಲಾ

ನಡೆದವು, ಕೆಲವು ಎತ್ತೆತೋ ದಿಕ್ಕ ಪಾಲಾಗಿ
ಅಪರಿಚಿತ ಗುಡಿಸಲಿಗೆ, ಬಂಗಲೆಗೆ, ಎತ್ತಲೆತ್ತಲೋ
ಬಸ್ಸಿನಲಿ, ರೈಲಿನಲಿ,
ಹೀಗೆ ಏಕಾಂತದಲಿ ಬಿಟ್ಟು ನನ್ನ

ಕಿಟಕಿಗೆ ಬಾಗಿಲಿರಲಿಲ್ಲ; ತದೇಕಚಿತ್ತವಾಗಿ
ನೋಡತೊಡಗಿದ ಕಣ್ಣು ರೆಪ್ಪೆ
ಬಡಿಯಲಿಲ್ಲ; ನಿಶ್ಚಲ ನೋಟ ನಭದ ನಕ್ಷತ್ರದೆಡೆಗೆ
ಏನೋ ಹುಡುಕುವ ತವಕ

ಕನಸುಗಳು ತೊಳೆದ ಬಟ್ಟೆಯಿಂದ ಜಾರಿ ಭುವಿಗಿಳಿದು
ಮೊಳೆದು, ಬೆಳೆದು,
ಅರಳಿ ಹೂವಾಗಿ ನಿಂತಿದೆ, ಕಂಗಳಿಗೆ ಅಪರಿಚಿತವಾಗಿ

ಅದೇ ಹಾದಿಯಲ್ಲಿ . ನಿರ್ಭಾವುಕವಾಗಿ
ಸಾಗುವಾಗ
ಹೆಜ್ಜೇನು ಮಕರಂದ ಹೀರಿ, ಕನಸ ಕದ್ದು
ಹಾರುವ ಕೊನೆಯ ಕ್ಷಣದಲ್ಲಿತ್ತು;

Friday, 28 December 2018

ನೀ ನನ್ನೊಳಗೆ


ನೀನು ನನ್ನೊಳಗೆ ಅರಳಿದ ಕತ್ತಲೆಯಲ್ಲ;
ನೀನು ಬೆಳಕು
ನೀನು ಒಳಗೊಳಗೇ ಬೆಂದ ಯಾತನೆಯಲ್ಲ
ನೀ ನಗುವಂಚಿನ ನಿಮಿತ್ತ

ನೀನು  ಕಣ್ಣೊಳಗೆ ಅಡಗಿದ ಕಣ್ಣೇರಲ್ಲ;
ಕಣ್ಣ ಮಿಂಚು
ನೀನು ಉಸಿರೊಳಗೆ ಹೆಚ್ಚಿದ ಎದೆ ಬಡಿತದ ಗುಂಗಲ್ಲ;
ನೀನು ಉಸಿರು

ನೀನು ತುಡಿತವಲ್ಲ;
ಹೃದಯದೊಳಗಿನ ಒಂದು ತವಕ
ನೀನು ಮಾತಲ್ಲ,
ಸದ್ದಿಲ್ಲದೆ ಕುಳಿತ ಗಳಿಗೆ

ನೀನು ಕನಸಲ್ಲ;
ಹೃದಯದಂಚಲಿ ಉಳಿದ ನಿನ್ನೆಯ ನೆನಪು
ನೀನು ನಿನ್ನೆಯಲ್ಲ
ನಾಳೆಗಳ ಹೊಂಗನಸ ಬರೆದ ಚಿತ್ರದ ಕುರುಹು

ನೀ ನನ್ನೊಳಗೆ
ಮರೆತ ನಿನ್ನೆಯ ಕಾಣದ ನಾಳೆಯ
ಕನಸು ಹೊಸೆದ ದಿನಗಳು