ನಿನ್ನೆ
ಮರೆತೂ ಮರೆತು ಹೋಗದ ದಿನಗಳು
ಹೃದಯದಂಚಿನ ಹೆಜ್ಜೆ ಗುರುತು
ಸುಮ್ಮನೆ ಸಾಗ ಹಾಕುವ ನೆವ
ಸೆಳೆತದ ತಿಳಿ ನೀರ ಮೇಲೆ ಅರಳಿ ನಿಂತ
ಶುದ್ದ ತಾವರೆ, ಕೇಸರ ರಾಡಿಯಾ
ಸವಿ ಸುವಾಸನೆ
ಕಾಲಚಕ್ರದೊಳು ಬೆನ್ನಿಕ್ಕಿ ಹೊರಟ
ಬದುಕಲೊಂದು ಹುಡುಕಾಟ
ಪ್ರೀತಿ ಇದ್ದೋ, ಇಲ್ಲದೆಯೋ ನೋವು;
ಕಣ್ಣಂಚಿನ ಕಾಡಿಗೆಯಂತೆ, ಮೆಲ್ಲನೆ
ರಂಗು ಬಳಿಯ ಹೊರಟ ಕುಂಚ,
ಸದ್ದಿಲ್ಲದೇ ಸುರಿದ ಮಳೆಗೆ ಓಕುಲಿಯಾಡಿದೆ,
ಬಣ್ಣ
ಕೊನೆಯಿರದ ಸ್ವಪ್ನದಲಿ ನೆನಪಿನ ತುಣುಕು
ಅಗಲಿಕೆಯ ಸೊಡರು, ಬೆಂಕಿ ಹಚ್ಚಿದೆ
ಉರಿವ ಜೀವದೊಳು ಸುಟ್ಟ ಹಸಿ ಬಯಕೆ
ನೀರವತೆಯ ಮೌನದ ನಿಶಕ್ತ ಮನಸು
ಸಸಿಯಾಗಿದೆ, ಕಾತರದ ನೋಟಕ್ಕೆ
ಮೊಗ್ಗಿಗೆ ಅಪ್ಪಿ ನಿಂತ ಇಬ್ಬನಿಯಂತೆ
ಮಧುರ ನೆನಪಿದೆ
ಹಸಿರ ಹಾಸಿ ನಿಂತ ಬಯಲು
ಒಂಟಿ ಪಯಣವೆಂದರೂ ನಗುವ ಹೂಗಳು,
ಚಿಲಿಪಿಲಿಗುಟ್ಟುವ ಹಕ್ಕಿ ಮರಿ,
ಹೃದಯದಲ್ಲೆಲ್ಲಾ ಹಾರಾಡುವ ಬಣ್ಣದ ಚಿಟ್ಟೆ
ಸುರಿವ ಸೋನೇ ಮಳೆ, ಬೆಳ್ಳಕ್ಕಿ ಸಾಲ ಪಯಣ
ಜೊತೆಗೆ ನಿನ್ನ ನೆನಪಿದೆ
ದೂರಾಗಿದೆ; ನಾ ಸಾಗಿ ಬಂದ
ಹಾದಿಯ ನಾಂದಿ
ಅಲ್ಲೊಂದು ಮರೀಚಿಕೆಯ ಅಂತ್ಯವಿದೆ, ನಿರಂತರತೆ ಹಾದಿಯಲಿ
No comments:
Post a Comment