ಅಡುಗೆ ಮನೆ
ನಿನ್ನೆಯತನಕ ಹೊಕ್ಕವಳೇ ಅಲ್ಲ ಒಳಗೆ,
ಕುಕ್ಕರ್ನಿಂದ ಈಗಸ್ಟೇ ಎರಡನೇ
ಕೂಗು ಹೊರಟಿದೆ,
ಇಷ್ಟು ಬೇಗ ಬೆಂದಿರಲಿಕ್ಕಿಲ್ಲ, ಕನಸು
ಚಾಚಿ ನಿಂತ ಬಯಲತ್ತ
ಮೊಗ ಒಡ್ಡಿ ಎರಡು ನಿಮಿಷ ಕಳೆದಿತ್ತೇನೋ
ಸಣ್ಣ ಕಿಟಕಿ, ಗಾಜಿನ ಬಾಗಿಲು ಅದಕ್ಕೇ
ಸ್ವಲ್ಪ ದೊಡ್ಡದಿರಬಹುದಿತ್ತು, ಬೆನ್ನಟ್ಟಲು ಕನಸ ಸ್ವಗತಕ್ಕೇ;
ನಕ್ಕಳವಳು-ನಮ್ಮ ದಿನಗಳಲ್ಲಿ ಕಿಟಕಿಯೇ
ಇರಲಿಲ್ಲ ಅಡುಗೆ ಮನೆಗೆಂದು
ಕೈಯಲಿನ್ನೂ ಹಸಿರಕ್ತದ ಕಲೆ ಮಾಸಿರಲಿಲ್ಲ!
ಚಾಕುವಿನಿಂದ ಕನಸು ಕತ್ತರಿಸುವಾಗ
ಕೈಕೊಯ್ದು ರಕ್ತ ಚೆಲ್ಲಿತ್ತು ಅಂದರೆ
ನಕ್ಕಾರು
ಇನ್ನೇನು ಮೂರನೇ ಕೂಗೂ ಹೊರಡಬಹುದು
ಹೀಗಿರಲಿಲ್ಲವಂತೆ; ಅಜ್ಜಿಯ ದಿನಗಳಲ್ಲಿ
ಪಾತ್ರೆಯಲ್ಲಿ ಕನಸ ಹಾಕಿ
ಉರಿ ಹಚ್ಚಿ ಬಿದಿರ ಕೊಳವೆಯಿಂದ
ಊದ ಬೇಕಿತ್ತತಂತೆ ಬೆಂಕಿ
ಉರಿಯಲು
ಅಜ್ಜಿಯಂತೂ ಚಿಕ್ಕವಳಿರಬೇಕಾದರೆ
ಕಲಿತಿದ್ದಳಂತೆ ರಕ್ತ ಚೆಲ್ಲದೇ
ಕನಸು ಕತ್ತರಿಸಲು
ಆದರೆ ಉರಿ ಹಚ್ಚುವಾಗ ಮಾತ್ರ
ಬೇಡವೆನ್ನುವಷ್ಟು ಕಣ್ಣೀರು ಬರುತಿತ್ತಂತೆ
ಎದೆಯಲ್ಲಿ ಬೆಂಕಿಯನ್ನು ಯಾರಿಗೂ ಕಾಣದಂತೆ
ಅಡಗಿಸಿಟ್ಟುಕೊಂಡು ನಗಬೇಕಿತ್ತಂತೆ
ಅಡುಗೆ ಮನೆಯ ಮೂಲೆಯಲ್ಲಿ
ಮಣ್ಣಿನ ನೆಲದಲ್ಲಿ
ಎಷ್ಟು ಕಣ್ಣೀರ ಹನಿ ಇಂಗಿ ಹೋದವೋ
ಲೆಕ್ಕಕ್ಕೆ ಇಲ್ಲವಂತೆ
ಈಗೀಗ ಅವಳ ಕಂಗಳಲ್ಲಿ ಕಣ್ಣೀರೇ
ಅಡಗಿ ಹೋಗಿದೆ.
ಮೂರನೇ ಕೂಗು ಆಯಿತು
ಈಗ ಬೆಂದಿರಬಹುದು
ಅವಳಂತೆ ನನ್ನ ಕಣ್ಣೀರೂ
ಹೀಗೆ ಮೂಲೆಯಲ್ಲಿ ಹರಿಯುವುದು
ಬೇಡ,
ಈ ಮಾರ್ಬಲ್ ನೆಲದಲ್ಲಿ!
ಕಣ್ಣಂಚಲ್ಲೇ ಅಡಗಿ ಹೋಗಲಿ
ಬೆಂಕಿ ಆರಿಸುವ ಮುನ್ನ
ಮತ್ತೆ ನೆನಪಾಯಿತು.
ಕಲೆ ಉಳಿಯದಂತೆ ತೊಳೆಯುವಾಗಲೇ
ನಿರ್ದರಿಸಿದೆ ನಾನೂ ಕಲಿಯಬೇಕು,
ನಾಳೆಯಿಂದ ಅಜ್ಜಿಯ ಹಾಗೆಯೇ
ಗಾಯ ಮಾಡಿಕೊಳ್ಳದೇ ರಕ್ತಚಿಮ್ಮದಂತೆ
ಕನಸು ಕತ್ತರಿಸಲು!
No comments:
Post a Comment