ಸತ್ತು ಬಿದ್ದಿದೆ ಕನಸುಗಳು...!
ಒಣಗಿಸಿ ಹೆಕ್ಕಿ
ಬುತ್ತಿ ಸೇರಿಸುತ್ತಾನೆ....!?
ಅವನು ಕನಸು ಮಾರುವ ಹುಡುಗ.
ಬಡತನದ ಬೇಗೆಯಲಿ
ಹೊಟ್ಟೆ ಕಟ್ಟಿಕೊಂಡು
ಹಸಿವಿನಿಂದ ಸತ್ತ ಕನಸುಗಳು
ಕೊಂಡವರ ಮನೆಯಲ್ಲಿ, ಮನದಲ್ಲಿ
ಜೀವ ತಳೆಯ ಬಹುದೆಂಬ
ಆಸೆಯೋ... ಏನೋ...!
ಕೂಗುತ್ತಾನೆ ಅರಚಿಕೊಂಡು,
'ಕನಸುಗಳು ಬೇಕೇ ಕನಸುಗಳು'
ಅಳುವ ಆತ ಒಮ್ಮೊಮ್ಮೆ
'ಎಂಥ ಕ್ಷಣ ನನ್ನದು' ಎಂದು; ಒಂದೇ ಕ್ಷಣ
ಸೆಟೆದು ಕೂರುವ ಮತ್ತೆ! 'ಬದುಕು ತನ್ನದು
ಪ್ರತಿಕ್ಷಣವೂ ಕೂಡ'. ಒಂದೇ ದ್ರಢತೆಯ ಮನ.
ಮಂಕಾದ ಕಂಗಳಲಿ ಆಸೆಯ ಬೆಳಕು
ದಾರಿ ಕಾಣಲೆಂದೋ
ಬದುಕು ಕಾಣಲೆಂದೋ ಯಾರಿಗೆ ಗೊತ್ತು?
ಮುಂದೆ ಸಾಗುವನು;
ಮುತ್ತು ರತ್ನಗಳಲ್ಲ ಇವು
ನನ್ನ ಬೆವರ ಹನಿಯಲ್ಲಿ
ಹಸಿದ ಕ್ಷಣದಲ್ಲಿ, ಕಣ್ಣೀರು ಜೊತೆಯಿರುವಾಗ
ಬಿದ್ದು ಸತ್ತ ಕನಸುಗಳಿವು...
ಹೆಜ್ಜೆ ಅಡಿ,
ಹಸಿ ಮಣ್ಣ ಎಡೆಯಲ್ಲಿ
ಯಾರಿಗೂ ಕಾಣದಂತೆ, ಹುಗಿದು
ಬಿಡಬಹುದಿತ್ತು, ನಿರಾಶಾವದಿಯಾಗಿದ್ದಲ್ಲಿ;
ಹೆಜ್ಜೆ ಜೊತೆ ಹೆಜ್ಜೆ ಕಟ್ಟಿ
ಮುಂದೆ ನಡೆದು ಕೊನೆ ಮುಟ್ಟುವ ಛಲ
ಬಿಡಲೊಲ್ಲ;
ಕನಸಿನೊಳಗೊಂದು ಕನಸು.
ಸುಡುತಿದೆ ಬಾರಿ ಮೈಯ ದೇಹ
ಇದ್ದದ್ದು ಎಲುಬು ಮಾತ್ರ
ಜೊತೆಗೆ ಕಂಚಿನ ಧ್ವನಿ
ಆಕರ್ಷಕ ಕಂಗಳು...
ಜಾಗ್ರತೆ, ಬೀಳದಿರಲಿ ಭುವಿಗೆ
ರಕುತದ ಹೊನಲಿನ ಒಂದು ಹನಿ
ಭೂಮಿ ಬರಡಾದೀತು
ಉದುರದಿರಲಿ ಕಣ್ಣೀರು
ಜಗತ್ತು ತೊಯ್ದು ಮುಳುಗೀತು...
ಕ್ಷಣಗಣನೆ ಅಲ್ಲ, ಕಾಲವನು ಹಿಡಿದು
ನಿಲ್ಲಿಸುವ ಛಲ!
ತನ್ನ ಭಾರವಾದ ಕನಸುಗಳ
ತುದಿ ಬೆರಳಲ್ಲಿ ಹಿಡಿದು
ಬ್ಯಾಲೆನ್ಸ್ ಮಾಡುವ ಹುಚ್ಚು ಹುಡುಗ...
ಸ್ವಾಭಿಮಾನದ ಕೆಚ್ಚು
ಬದುಕುವ ಹುಚ್ಚು ಬಿಡದೇ,
ನಡೆಯುವನು
ರೆಪ್ಪೆ ತೆರೆಯಾಲಾರದಂತೆ ಬಿದ್ದಿದ್ದಾನೆ...
ತೆರೆಯುವ ಹಂಬಲ
ಕೈ ಕಾಲು ಆಡದಂತಿದೆ,
ಬಿಸಿಲ ಬೇಗೆಗೆ
ಹಸಿವಿನಲಿ ನೊಂದವು
ಬದುಕಲು ಹೆದರಿ ಕುಳಿತವು
ಕನಸುಗಳಿವೆ ಅಲ್ಲಿ
ಹೆಕ್ಕಿ ತೆರೆಯಲಾರದಂತೆ ಹಾದಿಯಲಿ ಸೇರಿ ಹೋಗಿವೆ
ಕನಸು
ನನಸ ನಗ್ನತೆಗೆ ಜಾರದೆ
ಭಗ್ನಗೊಂಡು ಬಿದ್ದಿದೆ...!!!
ನೀರು ಬಯಸುವ ದೇಹದಲ್ಲೂ ಒಂದೇ
ಮಾತು, ಕನಸಿನದೇ...
ಕನಸು, ಮಾರುವ ಹುಡುಗ
ಸದ್ದಿಲ್ಲದೆ ಉಸಿರ ಹಾರಬಿಟ್ಟ
ಅವನು...
No comments:
Post a Comment